ಹ. ಅನಸ್ [ರ] ಹೇಳುತ್ತಾರೆ - ಅಬೂತಲ್ಹರ ಬಳಿ ಅತಿ ಹೆಚ್ಚು ಖರ್ಚೂರದ ತೋಟಗಳಿದ್ದುವು. ಬೈರುಹಾ ಎಂಬಲ್ಲಿನ ತೋಟವು ಅತ್ಯಂತ ಸಮೃದ್ಧವೂ ಅವರ ಅತ್ಯಂತ ಪ್ರಿಯವಾದುದೂ ಆಗಿತ್ತು. ಅದು ಮಸ್ಜಿದುನ್ನಬಿಯ ಎದುರು ಭಾಗದಲ್ಲಿತ್ತು. ಪ್ರವಾದಿ [ಸ] ತೋಟಕ್ಕೆ ಹೋಗಿ ಅದರ ಬಾವಿಯ ಶುದ್ಧ ನೀರು ಕುಡಿಯುತ್ತಿದ್ದರು. ಹ. ಅನಸ್ ಹೇಳುತ್ತಾರೆ - "ನೀವು ನಿಮಗೆ ಪ್ರಿಯವಾದ ವಸ್ತುವನ್ನು ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುವವರೆಗೆ ನೀವು ಅಲ್ಲಾಹನ ವೆಧೇಯ ದಾಸರಾಗಲಾರಿರಿ" (ಆಲಿ ಇಮ್ರಾನ್, 92) ಎಂಬ ಆಯತ್ ಅವತೀರ್ಣವಾದಾಗ ಅಬೂತಲ್ಹರು ಪ್ರವಾದಿವರ್ಯರ [ಸ] ಬಳಿಗೆ ಹೋಗಿ ಹೀಗೆಂದರು - "ಅಲ್ಲಾಹನು ಅಲ್ತನಾಲುಲ್ ಬಿರ್ರ ... ಎಂದು ಹೇಳಿದ್ದಾನೆ. ಬೈರುಹಾದ ತೋಟವು ನನ್ನ ಅತ್ಯಂತ ಪ್ರಿಯವಾದ ತೋಟವಾಗಿದೆ. ನಾನು ಅದನ್ನು ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಿದೆ. ಅದು ಅಲ್ಲಾಹನ ಬಳಿ ನನಗೆ ನೆರವಾದೀತೆಂದು ಭಾವಿಸುತ್ತೇನೆ. ಅಲ್ಲಾಹನು ತಮ್ಮೊಂದಿಗೆ ಎಲ್ಲಿ ಖರ್ಚು ಮಾಡಬೇಕೆಂದು ಆದೇಶಿಸಿರುವನೋ ಅಲ್ಲಿ ಖರ್ಚು ಮಾಡಿರಿ." ಪ್ರವಾದಿ [ಸ] ಹೇಳಿದರು - ಭೇಷ್! ನೀವು ಬಹಳ ಉತ್ತಮ ಕೆಲಸ ಮಾಡಿರಿರಿ. ಇದು ಲಾಭದಾಯಕ ವ್ಯಾಪಾರವಾಗಿದೆ. ಬಹಳ ಲಾಭದ ವ್ಯವಹಾರವಾಗಿದೆ.
[ಬುಖಾರಿ, ಮುಸ್ಲಿಮ್]
ಹ. ಅನಸ್ [ರ] ಹೇಳುತ್ತಾರೆ, ಮುಹಾಜಿರರು ಪ್ರವಾದಿಯವರಲ್ಲಿ [ಸ] ಹೀಗೆಂದರು - ನಮ್ಮ ಅನ್ಸಾರ್ ಸಹೋದರರು ಪುಣ್ಯವನ್ನೆಲ್ಲ ದೋಚಿ ಬಿಟ್ಟರು. ನಾವು ಅವರಂತಹ ಜನರನ್ನು ನೋಡಿಲ್ಲ. ಅವರ ಬಳಿ ಮಿಗತೆಯಿದ್ದುದನ್ನು ದೇವ ಮಾರ್ಗದಲ್ಲಿ ಚೆನ್ನಾಗಿ ಖರ್ಚು ಮಾಡುತ್ತಾರೆ. ಕಡಿಮೆಯಿದ್ದರೆ ಅದರಿಂದಲೂ ಬಡವರಿಗೆ ಆರ್ಥಿಕ ನೆರವು ನೀಡಲು ಹಿಂಜರಿಯುವುದಿಲ್ಲ. ಆ ಸ್ವಲ್ಪದರಲ್ಲಿ ಅವರನ್ನೂ ಸೇರಿಸಿಕೊಳ್ಳುತ್ತಾರೆ. ನಮ್ಮ ಖರ್ಚಿನ ಭಾರವನ್ನೂ ಅವರೇ ವಹಿಸಿಕೊಂಡಿದ್ದಾರೆ. ಪ್ರವಾದಿ [ಸ] ಕೇಳಿದರು - ಅವರ ಈ ಉಪಕಾರಕ್ಕಾಗಿ ನೀವು ಅವರಿಗೆ ಕೃತಜ್ಜತೆ ಸಲ್ಲಿಸುವುದಿಲ್ಲವೆ? ಅವರಿಗಾಗಿ ನೀವು ಪ್ರಾರ್ಥಿಸುವುದಿಲ್ಲವೇ? ಆಗ ಜನರು ಹೇಳಿದರು - ಹೌದು. ನಾವು ಅವರಿಗೆ ಕೃತಜ್ಜರಾಗಿದ್ದೇವೆ. ಅವರಿಗಾಗಿ ಪ್ರಾರ್ಥಿಸುತ್ತೇವೆ. ಪ್ರವಾದಿ [ಸ] ಹೇಳಿದರು - ಪುಣ್ಯಕ್ಕೆ ನೀವೂ ಅರ್ಹರಾಗಿದ್ದೀರಿ. ಅವರೂ ಅರ್ಹರಾಗಿದ್ದಾರೆ. ಅವರು ನಿಮ್ಮ ಮೇಲೆ ಜೌದಾರ್ಯ ತೋರಿದರು. ನೀವು ಅವರಿಗಾಗಿ ಪ್ರಾರ್ಥಿಸಿದಿರಿ.
[ಅಬೂ ದಾವೂದ್, ನಸಾಈ]
No comments:
Post a Comment